ಅಪೂರ್ವ

	ಯಜ್ಞಯಾಗಾದಿಕರ್ಮಗಳಿಂದ ನಿಯತಕಾಲಾವಧಿಯಲ್ಲಿ ನಷ್ಟವಾದರೂ ಕಾಲಾಂತರದಲ್ಲಿ ಸ್ವರ್ಗಾದಿಫಲಗಳು ತಪ್ಪದೆ ಹೇಗೆ ಉಂಟಾಗುತ್ತವೆಂಬುದರ ಬಗ್ಗೆ ಪೂರ್ವ ಮೀಮಾಂಸಕರು ಕಲ್ಪಿಸಿರುವ ಪರಿಹಾರವೇ ಅಪೂರ್ವ. ಕರ್ಮ ನಷ್ಟವಾದರೂ ಕಣ್ಣಿಗೆ ಕಾಣದ ಒಂದು ಅಪೂರ್ವ ಚಿರಸ್ಥಾಯಿಯಾಗಿ ಉತ್ಪನ್ನವಾಗಿ ಯಜ್ಞಕರ್ತೃವಿಗೆ ಫಲ ದೊರೆಯುವವರೆಗೆ ಜಾಗೃತವಾಗಿರುವುದೆಂದು ಅವರು ಹೇಳುತ್ತಾರೆ. ಒಂದು ಯಜ್ಞದಲ್ಲಿ ಪ್ರಧಾನ ಹಾಗೂ ಅಂಗಕರ್ಮಗಳಿರುವುದರಿಂದ ಅವಕ್ಕೆಲ್ಲ ಪ್ರತ್ಯೇಕ ಅಪೂರ್ವಗಳುಂಟೆಂದೂ ಎಲ್ಲವೂ ಕೂಡಿ ಪರಮಾ ಪೂರ್ವದಲ್ಲಿ ಪರ್ಯವಸಾನವಾಗುವವೆಂದೂ ಹೇಳಿದೆ. ಕುಮಾರಿಲಭಟ್ಟ ಯಜ್ಞ ಕರ್ತೃವಿನಲ್ಲಿ ಹುಟ್ಟುವ ಗುಣವನ್ನೇ ಅಪೂರ್ವ ಎಂದರೆ, ಪ್ರಭಾಕರ ವೇದವಾಕ್ಯದ ನಿಯೋಗಸಾಮಥ್ರ್ಯವೇ ಅಪೂರ್ವ ಎನ್ನುತ್ತಾನೆ. ಅಪೂರ್ವವೊಂದರಿಂದಲೇ ಫಲಪ್ರಾಪ್ತಿ ಶಕ್ಯವಿಲ್ಲವೆಂದೂ ಈಶ್ವರನ ಅಂಗೀಕಾರ ಅಗತ್ಯವೆಂದೂ ವೇದಾಂತಿಗಳು ಭಾವಿಸುತ್ತಾರೆ.

	ಮೀಮಾಂಸಕರ ಅಪೂರ್ವವನ್ನೇ ವೇದಾಂತಿಗಳು ಪ್ರಾರಬ್ಧಕರ್ಮವೆಂದೂ ನೈಯಾಯಿಕರು ಧರ್ಮಾಧರ್ಮವೆಂದೂ ವೈಶೇಷಿಕರು ಅದೃಷ್ಟವೆಂದೂ ಪೌರಾಣಿಕರು ಪುಣ್ಯಪಾಪಗಳೆಂದೂ ವ್ಯವಹರಿಸುತ್ತಾರೆ.					
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ